ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಅಬ್ಬರ: ಭಾರತದಲ್ಲಿ ₹1,084 ಕೋಟಿ ಗಳಿಕೆ, ವಿಶ್ವದಾದ್ಯಂತ ₹1,651 ಕೋಟಿ ಕಲೆಕ್ಷನ್!

ಬಾಲಿವುಡ್ ನಟ ರಣಬೀರ್ ಕಪೂರ್, ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಹಾಗೂ ಕನ್ನಡದ ನಟ ಯಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಭಾರತದಲ್ಲಿ ಬರೋಬ್ಬರಿ ₹1,084 ಕೋಟಿ ಗಳಿಸಿರುವ ಈ ಚಿತ್ರ, ವಿಶ್ವದಾದ್ಯಂತ ಒಟ್ಟು ₹1,651 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

'ಸ್ಯಾಕ್ನಿಲ್ಕ್' (Sacnilk) ವರದಿಯ ಪ್ರಕಾರ, ಭಾರತದಲ್ಲಿ ಚಿತ್ರದ ಒಟ್ಟು ಗಳಿಕೆ ₹1,084 ಕೋಟಿಯಾಗಿದ್ದು, ತೆರಿಗೆ ಕಡಿತದ ನಂತರದ ನಿವ್ವಳ ಗಳಿಕೆ (Net Collection) ₹907.15 ಕೋಟಿಯಾಗಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲಿಯೂ ಸಿನಿಮಾ ಉತ್ತಮ ಪ್ರದರ್ಶನ ನೀಡಿದ್ದು, ಸುಮಾರು ₹567 ಕೋಟಿ ಗಳಿಸಿದೆ ಎನ್ನಲಾಗಿದೆ. ಈ ಮೂಲಕ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ದೊಡ್ಡ ಮಟ್ಟದ ಸದ್ದು ಮಾಡಿದೆ.

ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬಂದ ಅದ್ಧೂರಿ ಸಿನಿಮಾ :

‘ರಾಮಾಯಣ’ ಸಿನಿಮಾವನ್ನು ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ ಹಾಗೂ ನಟ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿವೆ.

ಭಾರತೀಯ ಮಹಾಕಾವ್ಯ ರಾಮಾಯಣವನ್ನು ಆಧರಿಸಿರುವ ಈ ಚಿತ್ರದಲ್ಲಿ ಶ್ರೀರಾಮನ ಜೀವನ, ವನವಾಸ, ರಾವಣನಿಂದ ಸೀತೆಯ ಅಪಹರಣ ಸೇರಿದಂತೆ ಮಹತ್ವದ ಘಟನೆಗಳನ್ನು ಅದ್ಧೂರಿಯಾಗಿ ಚಿತ್ರಿಸಲಾಗಿದೆ. ವಿಶೇಷವಾಗಿ ಜಟಾಯುವಿನ ಸಾಹಸಮಯ ಸನ್ನಿವೇಶಗಳು ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿವೆ.

ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ :

ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿರುವುದು. ಭಾರತೀಯ ಪೌರಾಣಿಕ ಕಥೆಗೆ ಅಂತರರಾಷ್ಟ್ರೀಯ ಮಟ್ಟದ ಸಂಗೀತದ ಸ್ಪರ್ಶ ನೀಡಿರುವುದು ಚಿತ್ರದ ವಿಶೇಷ ಆಕರ್ಷಣೆಯಾಗಿದೆ.

ತಾರಾಬಳಗದಲ್ಲಿ ಖ್ಯಾತ ಕಲಾವಿದರ ದಂಡು :

ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಚಿತ್ರತಂಡದ ಪಾತ್ರವಿವರಗಳಲ್ಲಿ ತಿಳಿಸಲಾಗಿದೆ.

ಇವರ ಜೊತೆಗೆ ಸನ್ನಿ ಡಿಯೋಲ್, ಅನುಪಮ್ ಖೇರ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಆದಿನಾಥ್ ಕೊಠಾರೆ, ಅರುಣ್ ಗೋವಿಲ್, ಕುನಾಲ್ ಕಪೂರ್, ಇಂದಿರಾ ಕೃಷ್ಣನ್ ಹಾಗೂ ಲಾರಾ ದತ್ತಾ ಸೇರಿದಂತೆ ಹಲವು ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ.

ಯಾವಾಗ ಬಿಡುಗಡೆಯಾಗಲಿದೆ ರಾಮಾಯಣ ಭಾಗ 2?

‘ರಾಮಾಯಣ’ ಚಿತ್ರದ ಮುಂದುವರಿದ ಭಾಗಕ್ಕೂ ಈಗಾಗಲೇ ನಿರೀಕ್ಷೆ ಹೆಚ್ಚಾಗಿದೆ. 
‘ರಾಮಾಯಣ: ಭಾಗ 2’ ಸಿನಿಮಾ 2028ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮೊದಲ ಭಾಗದ ಯಶಸ್ಸಿನ ಹಿನ್ನೆಲೆಯಲ್ಲಿ ಎರಡನೇ ಭಾಗದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.